ನರ್ನ್‍ಸ್ಟ್, ವಾಲ್ಟರ್ ಹರ್ಮಾನ್
1864-1941. ಜರ್ಮನಿಯ ಭೌತರಸಾಯನ ವಿಜ್ಞಾನಿ. ಜನನ 1864 ಜೂನ್ 25, ಪಶ್ಚಿಮ ಪ್ರಷ್ಯ. ಮರಣ 1941 ನವೆಂಬರ್ 18, ಬರ್ಲಿನ್ ಸಮೀಪ. ನರ್ನ್‍ಸ್ಟ್ ಆಧುನಿಕ ಭೌತರಸಾಯನ ವಿಜ್ಞಾನದ ಸಂಸ್ಥಾಪಕರ ಪೈಕಿ ಅತ್ಯಂತ ಪ್ರತಿಭಾನ್ವಿತನೆಂದು ಹೆಸರಾಂತಿದ್ದಾನೆ. ಈ ವಿಭಾಗದಲ್ಲಿ ಈತ ನಡೆಸಿದ ಸಂಶೋದನೆಗಳನ್ನು ಗಮನಿಸಿ 1920ರಲ್ಲಿ ರಸಾಯನ ವಿಜ್ಞಾನ ವಿಭಾಗದ ನೊಬೆಲ್ ಪಾರಿತೋಷಿಕವನ್ನು ಈತನಿಗೆ ನೀಡಿ ಗೌರವಿಸಲಾಯಿತು. 

 	ಪಶ್ಚಿಮ ಪ್ರಷ್ಯ ಸಂಸ್ಥಾನದ ಬ್ರೀಸೆನ್ ಎಂಬಲ್ಲಿ ಜನಿಸಿದ ನರ್ನ್‍ಸ್ಟ್ ಜೂರಿಕ್, ಗ್ರಾಸ್ ಮತ್ತು ವಿರ್ಸ್‍ಬರ್ಗ್ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದು 1887ರಲ್ಲಿ ವಿರ್ಸ್‍ಬರ್ಗ್ ವಿಶ್ವವಿದ್ಯಾಲಯದ ಪ್ರಸಿದ್ಧ ವಿಜ್ಞಾನಿಯಾದ ಕೋಲ್‍ರಾಷ್ ಎಂಬಾತನ ಬಳಿ ಡಾಕ್ಟೊರೇಟ್ ಪದವಿಯನ್ನು ಪಡೆದ. ಅನಂತರ ಲೀಪ್ಸಿಗ್ ವಿಶ್ವವಿದ್ಯಾಲಯದಲ್ಲಿ ವಿಲ್‍ಹೆಲ್ಮ್ ಓಸ್‍ವಾಲ್ಡ್ ಎಂಬ ವಿಜ್ಞಾನಿಯ ಸಹಾಯಕನಾಗಿ ದುಡಿದು ಅಲ್ಲಿನ ಭೌತರಸಾಯನವಿಜ್ಞಾನ ವಿಭಾಗವನ್ನು ಸ್ಥಾಪಿಸಲು ನೆರವಾದ. 1890ರಲ್ಲಿ ಗಟಿಂಗೆನ್ ವಿಶ್ವವಿದ್ಯಾಲಯದ ಭೌತವಿಜ್ಞಾನ ವಿಭಾಗವನ್ನೂ 1905ರಲ್ಲಿ ಬರ್ಲಿನ್ ವಿಶ್ವವಿದ್ಯಾಲಯದ ಭೌತರಸಾಯನವಿಜ್ಞಾನ ಪ್ರಯೋಗಾಲಯವನ್ನೂ ಸೇರಿದ ನರ್ನ್‍ಸ್ಟ್ 1924ರಲ್ಲಿ ಬರ್ಲಿನ್ ವಿಶ್ವವಿದ್ಯಾಲಯದ ಪ್ರಾಯೋಗಿಕ ಭೌತವಿಜ್ಞಾನ ಸಂಸ್ಥೆಯ ನಿರ್ದೇಶಕನಾಗಿ ನೇಮಕಪಡೆದ. 1933ರಲ್ಲಿ ಈ ಹುದ್ದೆಯಿಂದ ನಿವೃತ್ತನಾದ.
ಒಂದು ಶತಮಾನದಷ್ಟು ಹಿಂದೆಯೇ ವೋಲ್ಟಾ (1745-1827) ವಿದ್ಯುತ್ ಕೋಶವನ್ನು ಶೋಧಿಸಿದ್ದು ಸರಿಯಷ್ಟೆ. ಅದರಲ್ಲಿ ಉಂಟಾಗುವ ವಿದ್ಯುತ್ ವಿಭವ ಅಥವಾ ವೋಲ್ಟೇಜಿಗೆ ನರ್ನ್‍ಸ್ಟ್ ಮೊತ್ತಮೊದಲ ಬಾರಿಗೆ ಸರಿಯಾದ ವಿವರಣೆಯನ್ನು ನೀಡಿದ (1889). ಇಂಥ ಕೋಶಗಳಲ್ಲಿ ಉತ್ಪಾದನೆ ಆಗುವ ವಿದ್ಯುತ್ತಿಗೂ ಕೋಶದ ಇತರ ಗುಣಗಳಿಗೂ ಇರುವ ಸಂಬಂಧಗಳ ಬಗ್ಗೆ ಸಂಶೋಧನೆ ನಡೆಸಿ ನರ್ನ್‍ಸ್ಟ್ ಸಮೀಕರಣವೆಂಬ ಹೆಸರಿನ ನಿಯಮವನ್ನು ಪಡೆದ. ಈ ಕೋಶಗಳಲ್ಲಿರುವ ರಾಸಾಯನಿಕ ದ್ರಾವಣಗಳಲ್ಲಿ ದ್ರಾವಣದ ಒತ್ತಡ ಉಂಟಾಗಿ ಇದರ ಪರಿಣಾಮವಾಗಿ ಎಲೆಕ್ಟ್ರೋಡುಗಳಿಂದ ಅಯಾನುಗಳು ಬೇರ್ಪಡುವುವು; ದ್ರಾವಣದಲ್ಲಿ ಅಯಾನುಗಳು ವಿಲೀನಿಸಿದಾಗ ಉಂಟಾಗುವ ಪರಾಸರಣ ಕ್ರಿಯೆಯ ಒತ್ತಡ (ಆಸ್ಮಾಟಿಕ್ ಪ್ರೆಶರ್) ದ್ರಾವಣದ ಒತ್ತಡವನ್ನು ವಿರೋಧಿಸುವುದು ಎಂದೂ ಇವೆರಡು ಕ್ರಿಯೆಗಳಿಂದ ಕೋಶದ ವಿದ್ಯುತ್ತನ್ನು ವಿವರಿಸಬಹುದೆಂದೂ ನರ್ನ್‍ಸ್ಟ್ ಸಿದ್ಧಾಂತಿಸಿದ. ಅಯಾನುಗಳು ದ್ರಾವಣಗಳಲ್ಲಿ ವಿಲೀನಿಸುವುದರ ಬಗ್ಗೆ ವಿಚಾರ ನಡೆಸಿ ಸಂತೃಪ್ತ ದ್ರಾವಣದಿಂದ ಘನವಸ್ತುಗಳು ಪ್ರಕ್ಷೇಪಗೊಳ್ಳುವುದರ ಬಗ್ಗೆ ಕೂಡ ವಿವರಣೆ ನೀಡಿದ. ಅಯಾನ್ ಸ್ವರೂಪದ ಸಂಯುಕ್ತಗಳು ನೀರಿನಲ್ಲಿ ಆನಯಾನ್ ಮತ್ತು ಕ್ಯಾಟಯಾನುಗಳಾಗಿ ಅತ್ಯಂತ ಸುಲಭವಾಗಿ ವಿಭಜನೆಗೊಳ್ಳುವ ಕ್ರಮವನ್ನು ವಿವರಿಸಿದ (1893). ನೀರಿನ ಪರಾವೈದ್ಯುತಾಂಕ (ಡೈಎಲೆಕ್ಟ್ರಿಕ್ ಕಾನ್‍ಸ್ಟೆಂಟ್) ಅತ್ಯಧಿಕವಾಗಿರುವುದರಿಂದ (ಸುಮಾರು 80) ನೀರು ಸಾಮಾನ್ಯವಾಗಿ ವಿದ್ಯುನ್ನಿರೋಧಕ, ಎಂದರೆ ಧನಕಣಗಳ ಮತ್ತು ಋಣಕಣಗಳ ಮಧ್ಯೆ ಇರುವ ಆಕರ್ಷಣಬಲ ನೀರಿನ ಅಣುಗಳಿಂದಾಗಿ ಬಹಳ ಕಡಿಮೆಯಾಗುತ್ತದೆ. ಆದ್ದರಿಂದ ನೀರಿನಲ್ಲಿ ವಿಲೀನಿಸದೆ ಅಪ್ಪಟವಾಗಿರುವಾಗ ಇಂಥ ಕಣಗಳ ಮಧ್ಯೆ ಇರುವ ಬಲ ನೀರಿನಲ್ಲಿ ವಿಲೀನಿಸಿದ ಬಳಿಕ ಬಹಳವಾಗಿ ಕುಗ್ಗಿ ಋಣ ಮತ್ತು ಧನ ಕಣಗಳು ಬೇರ್ಪಡುತ್ತವೆ. ಉದಾಹರಣೆಗೆ ನಾವು ಸಾಮಾನ್ಯವಾಗಿ ಬಳಸುವ ಘನರೂಪದಲ್ಲಿರುವ ಉಪ್ಪು ಸೋಡಿಯಮ್ ಎಂಬ ಧನ ಮತ್ತು ಕ್ಲೋರೀನ್ ಎಂಬ ಋಣಕಣಗಳಿಂದ ರಚಿತವಾಗಿದೆ. ಇವೆರಡು ವಿರುದ್ಧ ಸ್ವಭಾವದ ಅಯಾನುಗಳ ನಡುವೆ ಇರುವ ಆಕರ್ಷಣಬಲದಿಂದಾಗಿ ಉಪ್ಪಿನ ಘನರೂಪದಲ್ಲಿ ಸೋಡಿಯಮ್ ಧನಕಣದ ಸುತ್ತ ಕ್ಲೋರಿನ್ ಋಣಕಣಗಳೂ ಹಾಗೆಯೇ ಕ್ಲೋರೀನ್ ಋಣಕಣದ ಸುತ್ತ ಸೋಡಿಯಮ್ ಧನಕಣಗಳೂ ಜೋಡಿಕೊಂಡಿರುವುವು. ಆದರೆ ನೀರಿನಲ್ಲಿ ಉಪ್ಪನ್ನು ವಿಲೀನಿಸಿದ ಒಡನೆ ಇವೆರಡು ಅಯಾನುಗಳೂ ಬೇರ್ಪಡುವುದಲ್ಲದೆ ಈ ಅಯಾನುಗಳು ವಿದ್ಯುತ್ ಕ್ಷೇತ್ರದಲ್ಲಿ ಚಲಿಸುವುದರಿಂದ ಇವುಗಳಿಂದ ಕೂಡಿದ ನೀರು ಸಹ ವಿದ್ಯುದ್ವಾಹಕವಾಗುತ್ತದೆ. ಆದರೆ ಪರಾವೈದ್ಯುತಾಂಕ ಬಲು ಕಡಿಮೆ ಇರುವ ಇತರ ದ್ರವಗಳಲ್ಲಿ ಇಂಥ ಅಯಾನ್‍ರೂಪದ ವಸ್ತುಗಳು ವಿಭಜನೆಗೊಳ್ಳದೆ ಇರುವುದರಿಂದ ಅವನ್ನು ವಿಲೀನಿಸಿದಾಗಲೂ ಈ ದ್ರವಗಳು ವಿದ್ಯುದ್ವಾಹಕಗಳಾಗುವುದಿಲ್ಲ. ಈ ಅಂಶವನ್ನು ಸ್ವತಂತ್ರವಾಗಿ ಜೆ.ಜೆ. ತಾಮ್ಸನ್ ಕೂಡ ಶೋಧಿಸಿದ್ದರಿಂದ ಇದಕ್ಕೆ ನರ್ನ್‍ಸ್ಟ್-ತಾಮ್ಸನ್ ನಿಯಮವೆಂಬ ಹೆಸರು ಬಂದಿದೆ.

 	ನರ್ನ್‍ಸ್ಟ್‍ನ ಅತ್ಯಂತ ಪ್ರಸಿದ್ಧ ಸಂಶೋಧನೆ ಎಂದರೆ ಆತನ ಹೆಸರಿನಿಂದ ಸುಪರಿಚಿತವಾಗಿರುವ ಉಷ್ಣಪ್ರಮೇಯ. ಇದನ್ನು ಆತ 1906ರಲ್ಲಿ ಪ್ರತಿಪಾದಿಸಿದ. ಇದಕ್ಕೆ ಉಷ್ಣಗತಿವಿಜ್ಞಾನದ ಮೂರನೆಯ ನಿಯಮವೆಂಬ ಹೆಸರೂ ಇದೆ. ಇದನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಉಷ್ಣಶಾಸ್ತ್ರದ ಕೆಲವು ವಿಷಯಗಳನ್ನು ಇಲ್ಲಿ ವಿವರಿಸುವುದು ಅವಶ್ಯ. ಭೌತವಿಜ್ಞಾನದ ದೃಷ್ಟಿಯಲ್ಲಿ ಸಂಪೂರ್ಣವಾಗಿ ವಿಪರ್ಯಾಯ ಉಷ್ಣಯಂತ್ರವೊಂದನ್ನು ಊಹಿಸಿಕೊಳ್ಳೋಣ. ಇದು ಒಂದು ಉಷ್ಣಾಶಯದಿಂದ ಖಿ ಎಂಬ ಉಷ್ಣತೆಯ ಮಟ್ಟದಲ್ಲಿ Sಕಿ ಎಂಬ ಪರಿಮಾಣದ ಉಷ್ಣವನ್ನು ಹೀರಿಕೊಂಡರೆ, SS=Sಕಿ/ಖಿಯನ್ನು ಈ ಯಂತ್ರದ ಎಂಟ್ರೊಪಿಯಲ್ಲಾದ ಬದಲಾವಣೆ ಎಂದು ಕರೆಯುತ್ತಾರೆ. ಮೇಲಿನ ಸಮೀಕರಣದಲ್ಲಿ ಖಿ ಎಂಬುದು ಕೆಲ್ವಿನ್ ಅಥವಾ ನಿರಪೇಕ್ಷ ಮಾನಕದಲ್ಲಿದೆ. ಸಾಮಾನ್ಯವಾಗಿ ಎಂಟ್ರೋಪಿಯನ್ನು ವಸ್ತುಗಳಲ್ಲಿರುವ ಅವ್ಯವಸ್ಥೆಯ ಮಾನಕವೆಂದು ಪರಿಗಣಿಸಲಾಗಿದೆ. ಉಷ್ಣಗತಿವಿಜ್ಞಾನದ ಎರಡನೆಯ ನಿಯಮದ ಪ್ರಕಾರ ವಿಶ್ವಾದ್ಯಂತ ಆಗುವ ಭೌತ ಬದಲಾವಣೆಗಳು ಯಾವಾಗಲೂ ವಿಶ್ವದ ಎಂಟ್ರೋಪಿಯನ್ನು ಜಾಸ್ತಿಮಾಡುವಂತೆಯೇ ಇರುವುವು. ನರ್ನ್‍ಸ್ಟ್ ಹೊಸ ಪ್ರಮೇಯವನ್ನು ಪ್ರತಿಪಾದಿಸುವ ತನಕವೂ ಎಂಟ್ರೊಪಿಯ ವ್ಯತ್ಯಾಸಗಳ ಬಗ್ಗೆ ಮಾತ್ರವೇ ಸಂಶೋಧನೆಗಳನ್ನು ನಡೆಸಲಾಗಿತ್ತು. ಎಂಟ್ರೊಪಿಗೂ ಒಂದು ನಿರಪೇಕ್ಷ ಮಾನಕ ಇದೆಯೇ ಎಂದು ಪ್ರಶ್ನಿಸಿಕೊಂಡ ನರ್ನ್‍ಸ್ಟ್ ನಿರಪೇಕ್ಷ ಶೂನ್ಯದಲ್ಲಿ (-273.2(ಅ) ಎಲ್ಲ ಪದಾರ್ಥಗಳ ಎಂಟ್ರೊಪಿಯೂ ಶೂನ್ಯವೇ ಆಗಿರುವುದೆಂಬ ಪ್ರಮೇಯವನ್ನು ಪ್ರತಿಪಾದಿಸಿದ. ಇದರಿಂದಾಗಿ ಎಂಟ್ರೊಪಿಗೆ ಒಂದು ನಿರಪೇಕ್ಷ ಮಾನಕವನ್ನು ಕೊಟ್ಟಂತಾಯಿತು. ಈ ಪ್ರಮೇಯದ ಮುಖ್ಯವಾದ ಫಲಿತಾಂಶವೆಂದರೆ, ನಿರಪೇಕ್ಷ ವಸ್ತುಗಳು ಶೂನ್ಯವನ್ನು ಮುಟ್ಟುವಂತೆ ಅವನ್ನು ಶೀತಲಗೊಳಿಸುವುದು ಅಸಾಧ್ಯ. ಅತ್ಯಂತ ಎಚ್ಚರಿಕೆಯಿಂದ ಮತ್ತು ಬುದ್ಧಿವಂತಿಕೆಯಿಂದ ಶೂನ್ಯಕ್ಕೆ ಬಹಳ ಹತ್ತಿರ ಬರಬಹುದು. (ಉಷ್ಣತೆಯ ಮಟ್ಟವನ್ನು ಸುಮಾರು 0.00001ಏ ವರೆಗೆ ಈಗಾಗಲೇ ಇಳಿಸಲಾಗಿದೆ). ಆದರೆ ಶೂನ್ಯವನ್ನೇ ಪಡೆಯುವುದು ಅಸಾಧ್ಯ. ನರ್ನ್‍ಸ್ಟ್‍ನ ಪ್ರಮೇಯ ತಾತ್ತ್ವಿಕ ದೃಷ್ಟಿ ಒಂದರಿಂದಲೇ ಅಲ್ಲ ರಾಸಾಯನಿಕ ಕೈಗಾರಿಕೆಗಳ ದೃಷ್ಟಿಯಿಂದಲೂ ಬಲು ಮುಖ್ಯವಾಗಿದೆ. ಉದಾಹರಣೆಗೆ ಅಮೊನಿಯಾ ಅನಿಲದ ಉತ್ಪಾದನೆಯಲ್ಲಿ ಬರುವ ಲೆಕ್ಕಾಚಾರಗಳಲ್ಲೂ ಇದನ್ನು ಉಪಯೋಗಿಸುತ್ತಾರೆ. ಈ ಪ್ರಮೇಯವನ್ನು ಪರೀಕ್ಷಿಸುವ ಸಲುವಾಗಿ ನರ್ನ್‍ಸ್ಟ್ ತನ್ನ ವಿದ್ಯಾರ್ಥಿ ಮತ್ತು ಸಹೋದ್ಯೋಗಿಗಳ ಸಹಕಾರದಿಂದ ಅತ್ಯಂತ ಶೀತಲ ಸ್ಥಿತಿಯಲ್ಲಿ ಅನೇಕ ವಸ್ತುಗಳ ವಿಶಿಷ್ಟೋಷ್ಣವನ್ನು ಪ್ರಯೋಗಗಳ ಮೂಲಕ ಶೋಧಿಸಿದ. ಇದೇ ವೇಳೆ ಬಹಳ ಜಾಸ್ತಿ ಉಷ್ಣತೆಯ ಮಟ್ಟಕ್ಕೆ ಕಾಸಿದ ಅನೇಕ ಅನಿಲಗಳ ಸಾಂದ್ರತೆಯನ್ನೂ ಗುಣಿಸಿದ. 
 
	ಕೆಲವು ರಾಸಾಯನಿಕ ಕ್ರಿಯೆಗಳನ್ನು ಬೆಳಕಿನ ಕಿರಣಗಳ ಸಹಾಯದಿಂದ ನಡೆಸಬಹುದು. ಉದಾಹರಣೆಗೆ ಹೈಡ್ರೊಜನ್ ಮತ್ತು ಕ್ಲೋರೀನ್ ಅನಿಲಗಳ ಮಿಶ್ರಣದ ಮೇಲೆ ಬೆಳಕನ್ನು ಹಾಯಿಸುವುದರ ಮೂಲಕ ಇವೆರಡರ ಮಧ್ಯೆ ರಾಸಾಯನಿಕ ಕ್ರಿಯೆ ಉಂಟಾಗಿ ಹೈಡ್ರೊಜನ್‍ಕ್ಲೋರೈಡ್ ಎಂಬ ಸಂಯುಕ್ತ ಉತ್ಪತ್ತಿ ಆಗುತ್ತದೆ. ಈ ರಾಸಾಯನಿಕ ಕ್ರಿಯೆಯ ವೇಗವನ್ನು 1918ರಲ್ಲಿ ಮೊದಲ ಬಾರಿಗೆ ಸರಿಯಾಗಿ ಅರ್ಥಮಾಡಿಕೊಂಡವನೇ ನರ್ನ್‍ಸ್ಟ್. ಪರಮಾಣುಗಳ ಸರಪಣಿ ಕ್ರಿಯೆಯಿಂದ ಈ ರಾಸಾಯನಿಕ ಕ್ರಿಯೆ ತ್ವರಿತವಾಗಿ ಜರಗುವುದೆಂದು ಈತ ಮನಗಂಡ. ಇದರ ಪ್ರಕಾರ ಎರಡು ಕ್ಲೋರೀನ್ ಅಣುಗಳನ್ನು ಒಳಗೊಂಡು ಒಂದು ಅಣು ಬೆಳಕಿನ ಶಕ್ತಿಯಿಂದಾಗಿ ಎರಡು ಪರಮಾಣುಗಳಾಗಿ ವಿಭಜಿಸಲ್ಪಡುತ್ತದೆ (ಅಟ2(ಅಟ+ಅಟ). ಈ ಕ್ಲೋರೀನ್ ಪರಮಾಣು ಹೈಡ್ರೊಜನ್ನಿನ ಅಣುವಿನೊಂದಿಗೆ ವರ್ತಿಸಿ ಹೈಡ್ರೊಜನ್ ಕ್ಲೋರೈಡಿನ ಅಣುವೂ ಹೈಡ್ರೊಜನ್ನಿನ ಪರಮಾಣುವೂ ಉತ್ಪತ್ತಿ ಆಗುತ್ತದೆ (ಅಟ+ಊ2(ಊಅಟ+ಊ). ಈ ಹೈಡ್ರೊಜನ್ನಿನ ಪರಮಾಣು ಕ್ಲೋರೀನ್ ಅಣುವಿನೊಂದಿಗೆ ವರ್ತಿಸಿ ಪುನಃ ಹೈಡ್ರೊಜನ್ ಕ್ಲೋರೈಡ್ ಮತ್ತು ಮತ್ತೊಂದು ಕ್ಲೋರೀನ್ ಪರಮಾಣು ಉಂಟಾಗುತ್ತವೆ (ಊ+ಅಟ2(ಊಅಟ+ಅಟ) ಇತ್ಯಾದಿ. ಇಂಥ ಸರಪಣಿ ಕ್ರಿಯೆಗಳಿಂದಾಗಿ ಸ್ವಲ್ಪವೇ ಬೆಳಕನ್ನು ಈ ಮಿಶ್ರಣದ ಮೂಲಕ ಹಾಯಿಸಿ ಅನಂತರ ಬೆಳಕನ್ನು ನಿಲ್ಲಿಸಿದರೂ ಇವು ಮುಂದುವರಿದು ಹೈಡ್ರೊಜನ್ ಕ್ಲೋರೈಡ್ ಉತ್ಪತ್ತಿ ಆಗುತ್ತಲೇ ಇರುವುದು.
 
	ನರ್ನ್‍ಸ್ಟ್ ಮಾಡಿದ ಇತರ ಅನೇಕ ಸಂಶೋಧನೆಗಳನ್ನು ಕೆಳಗೆ ಸಂಗ್ರಹಿಸಲಾಗಿದೆ. ವಿದ್ಯುನ್ನಿರೋಧಕತ್ವವನ್ನು ಅಳತೆ ಮಾಡುವ ಹೊಸ ವಿಧಾನ (1894) ಸೂಚಿಯನ್ನು ಉಪಯೋಗಿಸಿ ದ್ರಾವಣಗಳಲ್ಲಿನ ಹೈಡ್ರೊಜನ್ನಿನ ಅಯಾನುಗಳ ಪರಿಮಾಣವನ್ನು (ಠಿಊ) ಕಂಡುಹಿಡಿಯುವ ವಿಧಾನ (1903), ನರಗಳ ಪ್ರಚೋದನೆಯ ತತ್ತ್ವಗಳು, ಇತ್ಯಾದಿ. ಹೈಡ್ರೊಜನ್ನಿನ ಎಲೆಕ್ಟ್ರೋಡನ್ನು ವಿದ್ಯುದ್ರಸಾಯನ ವಿಜ್ಞಾನದ ಮೂಲಭೂತ ಸಾಧನವಾಗಿ ಉಪಯೋಗಿಸಲು ಸಲಹೆ ಮಾಡಿದ. ಅನಿಲಗಳ ವಿಭಜನೆಯ ಪರಿಮಾಣವನ್ನು ಅವುಗಳ ಉಷ್ಣವಾಹಕತ್ವದ ಅಳತೆಯ ಮೂಲಕ ಕಂಡುಹಿಡಿದ. ಅನಿಲಗಳನ್ನು ಹೊತ್ತಿಸುವ ಬಗ್ಗೆಯೂ ಅತ್ಯಂತ ಜಾಸ್ತಿ ಒತ್ತಡದಲ್ಲಿ ಹೈಡ್ರೊಜನ್ ಮತ್ತು ನೈಟ್ರೊಜನ್ ಅನಿಲಗಳ ಕ್ರಿಯೆಯ ಬಗ್ಗೆಯೂ ಅನೇಕ ಪ್ರಯೋಗಗಳನ್ನು ನಡೆಸಿದ. ವಿಭಿನ್ನರೂಪಗಳುಳ್ಳ ಕ್ರಿಯೆಗಳ ಬಗ್ಗೆಯೂ ತಾತ್ತ್ವಿಕ ಸಂಶೋಧನೆಯನ್ನು ಮಾಡಿದ. ಹೈಡ್ರೊಜನ್ನನ್ನು ದ್ರವೀಕರಿಸುವ ಸುಲಭವಾದ ವಿಧಾನವೊಂದನ್ನು ಕಂಡುಹಿಡಿದ. ತಾನು ಪ್ರತಿಪಾದಿಸಿದ ಉಷ್ಣ ಪ್ರಮೇಯವನ್ನು ಉಪಯೋಗಿಸಿ ಭೌತಶಾಸ್ತ್ರದ ತತ್ತ್ವಗಳ ಬಗ್ಗೆ ಕೂಡ ಚಿಂತನೆ ನಡೆಸಿದ್ದುಂಟು.

 	ತನ್ನ ಸಂಶೋಧನೆಗಳನ್ನು ಕುರಿತು ನರ್ನ್‍ಸ್ಟ್ ಅನೇಕ ಗ್ರಂಥಗಳನ್ನು ಬರೆದಿದ್ದಾನೆ. 1893ರಲ್ಲೇ ಬರೆದ ಅವೊಗಾಡ್ರೊ ನಿಯಮ ಮತ್ತು ಉಷ್ಣಗತಿ ವಿಜ್ಞಾನದ ಪ್ರಕಾರ ತಾತ್ತ್ವಿಕ ರಸಾಯನಶಾಸ್ತ್ರ ಎಂಬ ಪ್ರಸಿದ್ಧವಾದ ಗ್ರಂಥ ಷೋನ್‍ಫ್ಲೈಸ್ ಎಂಬಾತನೊಡನೆ ಬರೆದ ಗಣಿತಶಾಸ್ತ್ರದ ಮೂಲಕ ವಿಜ್ಞಾನದ ಅಧ್ಯಯನ ಹಾಗೂ ತಾನೇ ಬರೆದ ಉಷ್ಣಶಾಸ್ತ್ರದ ಹೊಸ ಪ್ರಮೇಯ (1926) ಮುಂತಾದ ಗ್ರಂಥಗಳು ಅನೇಕ ಬಾರಿ ಪುನರ್ಮುದ್ರಿತವಾಗಿದೆ.

 	ಬರೀ ಮೂಲಭೂತ ಸಂಶೋಧನೆಗಳನ್ನು ನಡೆಸುವುದರಲ್ಲಿ ಮಾತ್ರವೇ ನರ್ನ್‍ಸ್ಟ್ ನಿರತನಾಗದೆ ವಿಜ್ಞಾನವನ್ನು ಕೈಗಾರಿಕೆಗಳಲ್ಲಿ ಉಪಯೋಗಿಸುವುದರಲ್ಲೂ ಬಹಳ ಆಸಕ್ತಿ ತಳೆದಿದ್ದ. ಉದಾಹರಣೆಗೆ, ಆಗಿನ ಕಾಲದಲ್ಲಿ ಸಮರ್ಪಕವಾದ ವಿದ್ಯುದ್ದೀಪಗಳಿರಲಿಲ್ಲ. ನರ್ನ್‍ಸ್ಟ್ ಸೆರ್ಯಾಮಿಕುಗಳನ್ನು ಉಪಯೋಗಿಸಿ ಆ ದೀಪಗಳನ್ನು ತಯಾರಿಸಿದ. ಆದರೆ ಎಡಿಸನ್ ಉಪಜ್ಞಿಸಿದ ಟಂಗ್‍ಸ್ಟನ್ ತಂತು ದೀಪಗಳು ಇದಕ್ಕಿಂತ ಉತ್ತಮವಾಗಿದ್ದರಿಂದ ಅವುಗಳದೇ ಮೇಲುಗೈಯಾಯಿತು. ವಿದ್ಯುತ್ತಿನಿಂದಲೇ ನುಡಿಸಬಹುದಾದ ಪಿಯಾನೋ ವಾದ್ಯವೊಂದನ್ನು ಕೂಡ ನರ್ನ್‍ಸ್ಟ್ ರಚಿಸಿದ್ದಿದೆ.
(ಎನ್.ವಿ.ಎಂ.; ಎಚ್.ಆರ್.ಆರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ